(ಅನುವಾದಿತ ಕಥೆ)
ಪೆಟ್ರೋಮ್ಯಾಕ್ಸ್ ಲೈಟಿನ ಬುಸುಬುಸು ಸದ್ದಿನೊಂದಿಗೆ, ಸಾಗರದ ಆ ಫಾರೆಸ್ಟ್ ರೆಸ್ಟ್ಹೌಸ್ನಲ್ಲಿ ನಮ್ಮ ರಾತ್ರಿಯ ಊಟ ನಡೆದಿತ್ತು. ಮಲೆನಾಡಿನ ಚಳಿಗೆ ಬಿಸಿ ಬಿಸಿ ಅಕ್ಕಿ ರೊಟ್ಟಿಯನ್ನು ಮುರಿದು, ಬದನೆಕಾಯಿ ಗೊಜ್ಜಿಗೆ ಅದ್ದಿ ತಿನ್ನುತ್ತಿದ್ದಾಗ, ಈ ಅರಣ್ಯ ಇಲಾಖೆಯ ವಸತಿಗೃಹದ ಅಡುಗೆಯವನೂ, ಉಸ್ತುವಾರಿಯೂ ಆಗಿದ್ದ ಲಕ್ಷ್ಮಣ ಮೆಲ್ಲನೆ ಮಾತು ತೆಗೆದ, "ನೀವು ಹುಣಸೆಕಟ್ಟೆ ಅಜ್ಜನ ದರ್ಶನಕ್ಕೆ ಹೋಗೋದಿಲ್ವಾ, ಸಾ'ಬ್ರೆ?"
ಆ 'ಹುಣಸೆಕಟ್ಟೆ ಅಜ್ಜ' ಯಾರೆಂದೇ ನಮಗೆ ಗೊತ್ತಿಲ್ಲದ ಮೇಲೆ, ದರ್ಶನದ ಪ್ರಶ್ನೆ ಎಲ್ಲಿಂದ ಬರಬೇಕು?
ಅದನ್ನೇ ಅವನಿಗೆ ಹೇಳಿದೆ.
"ನಮ್ಮ ಜೀಪ್ ಡ್ರೈವರ್ ರಾಮಣ್ಣನಿಗೆ ಹೇಳಿದ್ರೆ ಸಾಕು, ಅವನೇ ಕರ್ಕೊಂಡು ಹೋಗ್ತಾನೆ. ಅಡಿಕೆ ತೋಟಗಳೆಲ್ಲ ದಾಟಿ, ಕಾಡಿನ ಮಧ್ಯ ಆತನದ್ದೊಂದು ಸಣ್ಣ ಗುಡಿಸಲು. ಆ ಅಜ್ಜನೊಬ್ಬ ಪವಾಡ ಪುರುಷ. ಊರೂರುಗಳಿಂದ ದೊಡ್ಡ ದೊಡ್ಡ ಜನರೆಲ್ಲಾ ಆಶೀರ್ವಾದಕ್ಕೆ ಬರ್ತಾರೆ," ಎಂದ ಲಕ್ಷ್ಮಣ.
ಆದರೆ ನನ್ನ ಕುತೂಹಲವನ್ನು ನಿಜವಾಗಿಯೂ ಕೆರಳಿಸಿದ್ದು ಬೇರೆಯೇ ವಿಷಯ. ಆ ಅಜ್ಜ ಒಂದು ಬೃಹತ್ ಕಾಳಿಂಗ ಸರ್ಪವನ್ನು ಸಾಕಿದ್ದಾನಂತೆ. ಅದು ಅವನ ಗುಡಿಸಲಿನ ಪಕ್ಕದಲ್ಲೇ ಇರುವ ಹುತ್ತದಲ್ಲಿ ವಾಸವಾಗಿದ್ದು, ಪ್ರತಿದಿನ ಸಂಜೆ ತಪ್ಪದೇ ಬಂದು, ಅಜ್ಜ ಕೊಡುವ ಹಾಲನ್ನು ಕುಡಿದು ಹೋಗುತ್ತದೆ ಎಂಬ ವಿಷಯ ನನ್ನ ತಲೆಯಲ್ಲಿ ಹುಳ ಬಿಟ್ಟಿತು.
ನನ್ನ ಜೊತೆ ಜೀಪ್ ಹಂಚಿಕೊಂಡಿದ್ದ ಆ ಧೂರ್ಜಟಿ ರಾಯರು, ಈ ವಿಷಯ ಕೇಳಿ ಒಮ್ಮೆಲೇ ಗರಂ ಆದರು. "ಇಡೀ ದೇಶವೇ ಇಂಥಾ ನಕಲಿ ಸ್ವಾಮಿಗಳಿಂದ, ಬೂಟಾಟಿಕೆ ಬೈರಾಗಿಗಳಿಂದ ತುಂಬಿ ಹೋಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಿಜ್ಞಾನ ಬೆಳೆದಂತೆ, ನಮ್ಮ ಜನ ಈ ಮೂಢನಂಬಿಕೆಗಳ ಕೆಸರಿಗೆ ಇನ್ನಷ್ಟು ಆಳವಾಗಿ ಇಳಿಯುತ್ತಿದ್ದಾರೆ. ಇದೊಂದು ರೋಗವಿದ್ದಂತೆ, ಇದರ ಬಗ್ಗೆ ಯೋಚಿಸಿದರೆ ಮೈಯೆಲ್ಲಾ ಉರಿಯುತ್ತೆ," ಎಂದು ತಮ್ಮ ಮುಂದಿದ್ದ ಸೊಳ್ಳೆಯೊಂದನ್ನು ಬ್ಯಾಟ್ ತೆಗೆದು ‘ಪಟಾರ್’ ಎಂದು ಹೊಡೆದು ಮುಗಿಸಿದರು.
ಧೂರ್ಜಟಿ ರಾಯರು ನಲವತ್ತರ ಆಸುಪಾಸಿನ, ಕೃಶಕಾಯದ, ಬಿಳಿಚಿಕೊಂಡ ಮನುಷ್ಯ. ಚೂಪಾದ ಮುಖ, ಬೂದು ಬಣ್ಣದ ಕಣ್ಣುಗಳು. ನಮ್ಮಿಬ್ಬರ ಆಕಸ್ಮಿಕ ಪರಿಚಯ ಆಗಿದ್ದು ಈ ಫಾರೆಸ್ಟ್ ರೆಸ್ಟ್ ಹೌಸ್ನಲ್ಲೇ. ನಾನು ಬೆಂಗಳೂರಿನಿಂದ ನನ್ನ ಸ್ವಂತ ಊರಾದ ಮಂಗಳೂರಿನತ್ತ ಹೊರಟಿದ್ದೆ, ಮಧ್ಯೆ ಸಾಗರದಲ್ಲಿ ಹದಿನೈದು ದಿನಗಳ ರಜೆ ಕಳೆಯುವ ಯೋಚನೆಯಿತ್ತು. ಪ್ರವಾಸಿ ಮಂದಿರಗಳೆಲ್ಲಾ ಭರ್ತಿಯಾಗಿದ್ದರಿಂದ, ಅನಿವಾರ್ಯವಾಗಿ ಕಾಡಿನ ಮಧ್ಯದ ಈ ಫಾರೆಸ್ಟ್ ರೆಸ್ಟ್ ಹೌಸ್ಗೆ ಬರಬೇಕಾಯಿತು. ಆದರೆ ದಟ್ಟ ಅರಣ್ಯದ ನಡುವೆ, ಜಿಟಿಜಿಟಿ ಮಳೆಯ ಸದ್ದಿನೊಂದಿಗೆ ಇರುವುದು ನನಗೇನೂ ಬೇಸರ ತಂದಿರಲಿಲ್ಲ; ಬದಲಾಗಿ ಒಂದು ವಿಚಿತ್ರವಾದ ನೆಮ್ಮದಿ ಮತ್ತು ರೋಮಾಂಚನವನ್ನು ನೀಡುತ್ತಿತ್ತು.
ರಾಯರು ನನಗಿಂತ ಒಂದು ದಿನ ಮುಂಚೆಯೇ ಬಂದಿದ್ದರು. ಸುತ್ತಮುತ್ತಲ ಜಾಗ ನೋಡಲು ನಾವು ಇಲಾಖೆಯ ಜೀಪನ್ನು ಹಂಚಿಕೊಂಡಿದ್ದೆವು. ಹಿಂದಿನ ದಿನ ಹೊಸನಗರದ ಸಮೀಪದ ಇತಿಹಾಸ ಪ್ರಸಿದ್ಧ ನಗರ ಕೋಟೆಯನ್ನು ನೋಡಿ ಬಂದಿದ್ದೆವು. ಇಂದು ಬೆಳಿಗ್ಗೆ ಕೋಟೆಗುಡ್ಡ ನೋಡಿ, ಮಧ್ಯಾಹ್ನ ಗುಡವಿ ಪಕ್ಷಿಧಾಮದಲ್ಲಿ ಕಳೆದೆವು. ಏಳು ಮೈಲಿ ವಿಸ್ತಾರವಾದ ಆ ಜೌಗು ಪ್ರದೇಶದ ಪುಟ್ಟ ಪುಟ್ಟ ನಡುಗಡ್ಡೆಗಳಲ್ಲಿ ಪ್ರಪಂಚದ ಯಾವ್ಯಾವ ಮೂಲೆಯಿಂದಲೋ ಬಂದಿದ್ದ ಬಗೆಬಗೆಯ ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದವು. ನಾನು ಆ ಪಕ್ಷಿ ಪ್ರಪಂಚದಲ್ಲಿ ಕಳೆದುಹೋಗಿದ್ದೆ. ಆದರೆ ರಾಯರು ಮಾತ್ರ ಮಲೆನಾಡಿನ ಕಾಡಿನಲ್ಲಿ ವಿಪರೀತವಾಗಿ ಕಾಡುವ ಸಣ್ಣ ಸಣ್ಣ 'ನುಸಿ'ಗಳ ಕಾಟದಿಂದ ಹೈರಾಣಾಗಿ ಗೊಣಗುತ್ತಿದ್ದರು.
ರಾತ್ರಿ ಎಂಟೂವರೆಯ ಹೊತ್ತಿಗೆ ಊಟ ಮುಗಿಸಿ, ಜಗಲಿಯಲ್ಲಿದ್ದ ಬೆತ್ತದ ಕುರ್ಚಿಗಳ ಮೇಲೆ ಕುಳಿತು, ಬೆಳದಿಂಗಳಲ್ಲಿ ಕಾಡಿನ ಸೌಂದರ್ಯವನ್ನು ಆಸ್ವಾದಿಸುತ್ತಿದ್ದೆವು. "ಲಕ್ಷ್ಮಣ ಹೇಳಿದನಲ್ಲ, ಆ ಅಜ್ಜನನ್ನು ಒಮ್ಮೆ ನೋಡಿಕೊಂಡು ಬಂದರೆ ಹೇಗಿರುತ್ತೆ?" ಎಂದು ಮಾತು ಆರಂಭಿಸಿದೆ.
ತಮ್ಮ ಸಿಗರೇಟನ್ನು ದೂರದ ನೀಲಗಿರಿ ಮರದತ್ತ ಎಸೆಯುತ್ತಾ, ರಾಯರು ಖಾರವಾಗಿ ಹೇಳಿದರು, "ಕಾಳಿಂಗ ಸರ್ಪಗಳನ್ನು ಎಂದಿಗೂ ಪಳಗಿಸಲು ಸಾಧ್ಯವಿಲ್ಲ. ನನಗೆ ಹಾವುಗಳ ಬಗ್ಗೆ ಚೆನ್ನಾಗಿ ಗೊತ್ತು. ನನ್ನ ಬಾಲ್ಯವೆಲ್ಲಾ ಕಾಫಿ ತೋಟಗಳಲ್ಲಿ ಕಳೆದಿದ್ದು. ನನ್ನ ಸ್ವಂತ ಕೈಯಿಂದಲೇ ಹತ್ತಾರು ಹಾವುಗಳನ್ನು ಕೊಂದಿದ್ದೇನೆ. ಕಾಳಿಂಗ ಸರ್ಪ ಅತ್ಯಂತ ವಿಷಕಾರಿ, ಅತ್ಯಂತ ಕ್ರೂರ ಜೀವಿ. ಸಾಧು ಅದಕ್ಕೆ ಹಾಲು ಕುಡಿಸುತ್ತಾನೆ ಎಂಬ ಕಥೆಯನ್ನು ಸುಲಭವಾಗಿ ನಂಬಬಾರದು."

ನಾನು ಹೇಳಿದೆ, "ನಾಳೆ ಬೆಳಿಗ್ಗೆ ನಾವು ಕೆಳದಿ ನೋಡಲು ಹೋಗುತ್ತಿದ್ದೇವೆ. ಮಧ್ಯಾಹ್ನದ ಮೇಲೆ ನಮಗೆ ಮಾಡಲು ಬೇರೇನೂ ಕೆಲಸವಿಲ್ಲ."
"ನಿಮಗೆ ಈ ಸಾಧು-ಸಂತರ ಮೇಲೆ ಬಹಳ ನಂಬಿಕೆ ಇದ್ದ ಹಾಗಿದೆ?" ಅವರ ಧ್ವನಿಯಲ್ಲಿದ್ದ ವ್ಯಂಗ್ಯ ನನಗೆ ಸ್ಪಷ್ಟವಾಗಿ ತಿಳಿಯಿತು. ಆದರೂ ನಾನು ಶಾಂತವಾಗಿ, "ನಂಬಿಕೆಯ ಪ್ರಶ್ನೆಯೇ ಇಲ್ಲ, ನಾನೆಂದೂ ಸಾಧುಗಳ ಸಹವಾಸ ಮಾಡಿಲ್ಲ. ಆದರೆ ಈ ಹಾವಿನ ಕಥೆಯ ಬಗ್ಗೆ ಸ್ವಲ್ಪ ಕುತೂಹಲವಿದೆ," ಎಂದೆ.
"ನನಗೂ ಒಂದು ಕಾಲದಲ್ಲಿ ಕುತೂಹಲವಿತ್ತು, ಆದರೆ ಆ ಸಾಧುವೊಬ್ಬನ ಸಹವಾಸದ ನಂತರ..." ಎಂದು ರಾಯರು ನಿಲ್ಲಿಸಿದರು. ಅವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತಂತೆ. ಯಾರೋ ಸನ್ಯಾಸಿ ಕೊಟ್ಟ ಗಿಡಮೂಲಿಕೆಯ ಔಷಧಿಯನ್ನು ನಂಬಿ ಕುಡಿದು, ತೀವ್ರವಾದ ಹೊಟ್ಟೆನೋವಿನಿಂದ ಬಳಲಿದ್ದರಂತೆ. ಅಂದಿನಿಂದ, ಭಾರತದ ಶೇಕಡಾ ತೊಂಬತ್ತರಷ್ಟು ಸಾಧುಗಳನ್ನು ಅವರು ನಕಲಿ ಎಂದೇ ಪರಿಗಣಿಸಿದ್ದರು.
ನನಗೆ ಅವರ ಈ ಕೋಪ ತಮಾಷೆಯಾಗಿ ಕಂಡಿತು. "ನೀವು ಕಾಳಿಂಗ ಸರ್ಪವನ್ನು ಪಳಗಿಸಲು ಸಾಧ್ಯವಿಲ್ಲ ಅಂದಿರಿ; ನಮ್ಮಂಥವರಿಗೆ ಅದು ಅಸಾಧ್ಯವಿರಬಹುದು. ಆದರೆ ಹಿಮಾಲಯದ ಗುಹೆಗಳಲ್ಲಿ ಹುಲಿಗಳೊಂದಿಗೆ ವಾಸಿಸುವ ಯೋಗಿಗಳ ಬಗ್ಗೆ ನಾನು ಕೇಳಿದ್ದೇನೆ," ಎಂದು ಅವರನ್ನು ಕೆಣಕಿದೆ.
"ಕೇಳಿರಬಹುದು, ಆದರೆ ನಿಮ್ಮ ಕಣ್ಣಾರೆ ನೋಡಿದ್ದೀರಾ?" ರಾಯರು ಸವಾಲು ಹಾಕಿದರು.
ನಾನು ಇಲ್ಲ ಎನ್ನಬೇಕಾಯಿತು.
"ನೀವು ಎಂದಿಗೂ ನೋಡುವುದಿಲ್ಲ," ರಾಯರು ಮುಂದುವರಿಸಿದರು. "ಇದು ಕಟ್ಟುಕಥೆಗಳ ನಾಡು. ಪುರಾಣಗಳನ್ನೇ ನೋಡಿ. ಇತಿಹಾಸ ಎನ್ನುತ್ತಾರೆ, ಆದರೆ ವಾಸ್ತವದಲ್ಲಿ ಅವು ಅಸಂಬದ್ಧ ಕಥೆಗಳು. ಹತ್ತು ತಲೆಯ ರಾವಣ, ಬಾಲಕ್ಕೆ ಬೆಂಕಿ ಇಟ್ಟು ಊರು ಸುಟ್ಟ ಹನುಮಂತ, ಭೀಮನ ಹಸಿವು, ಘಟೋತ್ಕಚ, ಹಾರುವ ಪುಷ್ಪಕ ವಿಮಾನ... ಇದಕ್ಕಿಂತ ಅಸಂಬದ್ಧವಾದದ್ದನ್ನು ಊಹಿಸಲು ಸಾಧ್ಯವೇ? ಆದರೂ ವಿದ್ಯಾವಂತರೂ ಸಹ ಈ ಕಥೆಗಳನ್ನು ಕಣ್ಮುಚ್ಚಿ ನಂಬುತ್ತಾರೆ."
ರಾಯರ ಈ ಎಲ್ಲ ವಿರೋಧದ ನಡುವೆಯೂ, ಮರುದಿನ ನಾವು ಕೆಳದಿ ವೀಕ್ಷಣೆ ಮುಗಿಸಿ, ಮಧ್ಯಾಹ್ನ ಜೀಪಿನಲ್ಲಿ ಅಜ್ಜನ ಆಶ್ರಮವನ್ನು ತಲುಪಿದೆವು. ರಾಯರೂ ಸುಮ್ಮನೆ ಜೊತೆಯಾದರು, ಬಹುಶಃ ಅವರಿಗೂ ಒಳಗೊಳಗೆ ಕುತೂಹಲವಿತ್ತು. ಆಶ್ರಮವು ಕಾಡಿನ ಮಧ್ಯದ ಬಯಲಿನಲ್ಲಿ ಒಂದು ಬೃಹತ್ ಹುಣಸೆ ಮರದ ಕೆಳಗಿತ್ತು.
ತೆಂಗಿನ ಗರಿಯ ಗುಡಿಸಲಿನಲ್ಲಿ, ಅಜ್ಜ ಕರಡಿಯ ಚರ್ಮದ ಮೇಲೆ ಕುಳಿತಿದ್ದ; ಆತನ ಪಕ್ಕದಲ್ಲಿ ಒಬ್ಬ ಯುವ ಶಿಷ್ಯನಿದ್ದ. ಸೂರ್ಯಾಸ್ತಕ್ಕೆ ಇನ್ನೂ ಒಂದು ಗಂಟೆ ಇತ್ತು, ಆದರೆ ಕಾಡಿನ ದಟ್ಟಣೆಯಿಂದಾಗಿ ಜಾಗ ಸಾಕಷ್ಟು ಕತ್ತಲಾಗಿತ್ತು. ಅಜ್ಜನ ಮುಂದೆ ಬೆಂಕಿ ಉರಿಯುತ್ತಿತ್ತು, ಕೈಯಲ್ಲಿ ಗಾಂಜಾ ಚಿಲುಮೆ ಇತ್ತು. ಬೆಂಕಿಯ ಬೆಳಕಿನಲ್ಲಿ ಗುಡಿಸಲಿನ ಗೋಡೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದತ್ತ ನನ್ನ ದೃಷ್ಟಿ ಹರಿಯಿತು. ಅದರಲ್ಲಿ ಸುಮಾರು ಹನ್ನೆರಡು ಅಡಿ ಉದ್ದನೆಯ ಹಾವಿನ ಪೊರೆಗಳು ನೇತಾಡುತ್ತಿದ್ದವು!
ರಾಯರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು: "ಸುತ್ತಿ ಬಳಸಿ ಮಾತು ಬೇಡ; ಹಾವಿನ ಊಟದ ಸಮಯದ ಬಗ್ಗೆ ಕೇಳಿ."
"ಹಾಗಾದರೆ ನೀವು ಬಾಲಕೃಷ್ಣನನ್ನು ನೋಡಬೇಕೆ?" ಚಿಲುಮೆಯ ಹಿಂದಿನಿಂದ ನಗುತ್ತಾ, ನಮ್ಮ ಮನಸ್ಸನ್ನು ಓದಿದವರಂತೆ ಅಜ್ಜ ಕೇಳಿದ. ಡ್ರೈವರ್ ರಾಮಣ್ಣ ಬರುವಾಗ ಆ ಹಾವಿನ ಹೆಸರು ಬಾಲಕೃಷ್ಣ ಎಂದು ಹೇಳಿದ್ದ.
ನಾನು ಕೈ ಮುಗಿದು, “ಹೌದು ಸ್ವಾಮಿಗಳೆ” ಎಂದೆ.

ಅಜ್ಜ ದುಃಖದಿಂದ ತಲೆಯಾಡಿಸಿದ. ಪ್ರತಿದಿನ ಸಂಜೆ ತಪ್ಪದೆ ಬರುವ ಬಾಲಕೃಷ್ಣ ನಿನ್ನೆಯಿಂದ ಬಂದಿಲ್ಲ ಎಂದ.
"ಇಂದು ಹುಣ್ಣಿಮೆ, ಹಾಗಾಗಿ ಅವನು ಬರುವುದಿಲ್ಲ. ಆದರೆ ನಾಳೆ ಖಂಡಿತ ಬರುತ್ತಾನೆ." ಜೊತೆಗೆ, ಹಾವಿಗೆ ಹುಷಾರಿಲ್ಲದಾಗ ಹುತ್ತದೊಳಗೆ ಕೆಂಪು ಇರುವೆಗಳು ಸೇರಿಕೊಂಡು ಹಾವನ್ನು ಕಾಡುತ್ತಿದ್ದವು, ತಾನು ಶಾಪ ನೀಡಿ ಅವನ್ನೆಲ್ಲಾ ನಾಶಮಾಡಿದೆ ಎಂದ.
ಈ ಹಂತದಲ್ಲಿ ರಾಯರು ನನ್ನತ್ತ ಕಡೆಗಣ್ಣಿನಿಂದ ವ್ಯಂಗ್ಯವಾಗಿ ನೋಡಿದರು. ಕಾವಿ ಬಟ್ಟೆ, ಉದ್ದನೆಯ ಜಡೆ, ಕಿವಿಯಲ್ಲಿ ಕಬ್ಬಿಣದ ಓಲೆ—ಅಜ್ಜ ಬೇರೆ ಸಾಧುಗಳಿಗಿಂತ ಭಿನ್ನವಾಗಿ ಕಾಣುತ್ತಿರಲಿಲ್ಲ. ಆದರೂ ಆ ಮಬ್ಬುಗತ್ತಲಲ್ಲಿ ಆತನಿಂದ ಕಣ್ಣು ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಹಾವು ನೋಡುವ ಭರವಸೆ ಹೋದ ಮೇಲೆ ಅಲ್ಲಿ ಕೂರುವ ಅರ್ಥವಿರಲಿಲ್ಲ. ಕತ್ತಲಾದರೆ ಕಾಡುಮೃಗಗಳ ಕಾಟ ಬೇರೆ. ನಾವು ಅಜ್ಜನಿಗೆ ನಮಸ್ಕರಿಸಿ, ಜೀಪ್ ಕಡೆಗೆ ಹೊರಟೆವು.
ಕೆಲವು ಹೆಜ್ಜೆ ಹೋಗಿದ್ದೆವಷ್ಟೇ, ರಾಯರು ಹಠಾತ್ತನೆ, "ಆ ಹಾವು ಇರೋ ಹುತ್ತವನ್ನಾದರೂ ನೋಡಬಹುದಿತ್ತಲ್ಲಾ?" ಎಂದರು.
ನಾವು ಡ್ರೈವರ್ ರಾಮಣ್ಣನನ್ನು ಕರೆದೆವು. ಗುಡಿಸಲಿನತ್ತ ಹೋಗುವ ಬದಲು, ಒಂದು ಕಿರಿದಾದ ದಾರಿಯಲ್ಲಿ ಸಾಗಿ ಮುಳ್ಳಿನ ಪೊದೆಯೊಂದರ ಬಳಿ ಬಂದೆವು. ರಾಮಣ್ಣ ಆ ಪೊದೆಯ ಹಿಂದೆಯೇ ಹುತ್ತವಿದೆ ಎಂದ. ರಾಯರು ತಮ್ಮ ಜೇಬಿನಿಂದ ಒಂದು ಸಣ್ಣ ಎಲೆಕ್ಟ್ರಿಕ್ ಟಾರ್ಚ್ ತೆಗೆದು ಬೆಳಕು ಬಿಟ್ಟರು. ಹುತ್ತ ಕಾಣಿಸಿತು. ಆದರೆ ಹಾವು ಕೇವಲ ಇಬ್ಬರು ಕುತೂಹಲಿಗಳಿಗೆ ಮುಖ ತೋರಿಸಲು ಹೊರಬರುವ ಸಾಧ್ಯತೆ ಇತ್ತೇ? ನಾನು ವಾಪಸ್ ಹೋಗೋಣ ಎಂದೆ, ಆದರೆ ರಾಯರು ಹಾವನ್ನು ಹೊರಗೆಳೆಯುವ ಛಲದಲ್ಲಿದ್ದಂತೆ ಕಂಡಿತು.
ಹಠಾತ್ತನೆ ರಾಯರು ಮಣ್ಣಿನ ಹೆಂಟೆಗಳನ್ನು ಹೆಕ್ಕಿ ಆ ಪೊದೆಗೆ ಬಲವಾಗಿ ಹೊಡೆಯಲು ಪ್ರಾರಂಭಿಸಿದರು!
"ಏನಾಯ್ತು ನಿಮಗೆ? ನೀವೇ ಅದರ ಅಸ್ತಿತ್ವವನ್ನೇ ನಂಬಿರಲಿಲ್ಲವಲ್ಲಾ?" ಎಂದು ನಾನು ಚಕಿತನಾಗಿ ಕೇಳಿದೆ.
"ನಾನು ಈಗಲೂ ನಂಬಿಲ್ಲ. ಇದರಿಂದ ಅದು ಹೊರಬರದಿದ್ದರೆ, ಅಜ್ಜನ ಕಥೆ ಬರೀ ಸುಳ್ಳು ಅಂತ ಸಾಬೀತಾಗುತ್ತೆ. ಇಂಥ ಸುಳ್ಳುಗಳು ನಾಶವಾದಷ್ಟೂ ಒಳ್ಳೇದು!" ಎನ್ನುತ್ತಾ ದೊಡ್ಡ ಹೆಂಟೆಯೊಂದನ್ನು ಎಸೆದರು.
ಅದು ಢಪ್ ಎಂದು ಬಿದ್ದು ಪೊದೆಯ ಒಂದು ಭಾಗವನ್ನು ನಾಶಮಾಡಿತು. ಕೆಲವು ಸೆಕೆಂಡುಗಳ ಕಾಲ ಮೌನ. ಆಮೇಲೆ ಒಂದು ಒಣಗಿದ, ಮೃದುವಾದ ಅನಿರ್ದಿಷ್ಟ ಸ್ಥಾಯಿಯ ಹಿಸ್ಸ್ ಸಿಳ್ಳೆ ಕೇಳಿಸಿತು. ಎಲೆಗಳ ಶಬ್ಧದೊಂದಿಗೆ ಟಾರ್ಚ್ನ ಬೆಳಕಿನಲ್ಲಿ ಕಪ್ಪು ಮತ್ತು ಹೊಳೆಯುವ ಏನೋ ಹುತ್ತದಿಂದ ನಿಧಾನವಾಗಿ ಹೊರಬರುತ್ತಿರುವುದು ಕಂಡಿತು.
ಮರುಕ್ಷಣವೇ, ಪೊದೆಯ ಎಲೆಗಳು ಅಲುಗಾಡಿ ಬೃಹತ್ ಕಾಳಿಂಗ ಸರ್ಪದ ತಲೆ ಹೊರಬಂದಿತು!
ಬೆಳಕು ಅದರ ಹೊಳೆಯುವ ಕಣ್ಣುಗಳನ್ನು ಮತ್ತು ಕವಲೊಡೆದ ನಾಲಿಗೆಯನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು. ರಾಮಣ್ಣ ಭಯದಿಂದ, "ಸಾಬ್ ಬನ್ನಿ ಹೋಗೋಣ," ಎಂದು ಗೋಗರೆಯುತ್ತಿದ್ದ. ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನಾನು ಎಂದೂ ನೋಡಿರಲಿಲ್ಲ. ಅಚ್ಚರಿಯೆಂದರೆ ಅದು ನಮ್ಮ ಮೇಲೆ ದಾಳಿ ಮಾಡಲು ಯಾವುದೇ ಪ್ರಯತ್ನ ಮಾಡಲಿಲ್ಲ.
ಹಠಾತ್ತನೆ ಟಾರ್ಚ್ನ ಬೆಳಕು ನಡುಗಿತು. ರಾಯರು ತ್ವರಿತವಾಗಿ ಕಲ್ಲೊಂದನ್ನು ಎತ್ತಿಕೊಂಡು ತಮ್ಮೆಲ್ಲಾ ಶಕ್ತಿಯನ್ನು ಬಳಸಿ ಆ ಹಾವಿನತ್ತ ಎಸೆದರು! ಸತತವಾಗಿ ಎರಡು, ಮೂರು ಕಲ್ಲುಗಳು ಕ್ಷಿಪಣಿಗಳಂತೆ ಬಿದ್ದವು.

ಮುಂದೆ ಏನಾಗುತ್ತದೆಂಬ ಭೀಕರ ಕಲ್ಪನೆ ನನ್ನನ್ನು ಆವರಿಸಿತು.
"ರಾಯರೇ, ಯಾಕೀ ಹುಚ್ಚು ಕೆಲಸ ಮಾಡಿದ್ರಿ?" ಎಂದು ಬೆಚ್ಚಿಬಿದ್ದು ಕೂಗಿದೆ.
ರಾಯರ ಮುಖದಲ್ಲಿ ಒಂದು ವಿಕೃತವಾದ ವಿಜಯದ ನಗೆ ಮೂಡಿತ್ತು. ಉಬ್ಬಸ ಬಿಡುತ್ತಲೇ, "ಒಂದು ಮಾರಿಗಾದರೂ ಗತಿ ಕಾಣಿಸಿದ್ನಲ್ಲ!" ಎಂದು ಉದ್ಗರಿಸಿದರು.
ಡ್ರೈವರ್ ರಾಮಣ್ಣ ಬಾಯಿ ಬಿಟ್ಟುಕೊಂಡು ಆ ಹುತ್ತದತ್ತಲೇ ನೋಡುತ್ತಿದ್ದ. ನಾನು ರಾಯರ ಕೈಯಿಂದ ಟಾರ್ಚ್ ಕಿತ್ತುಕೊಂಡು ಬೆಳಕು ಚೆಲ್ಲಿದೆ. ಹಾವಿನ ನಿರ್ಜೀವ ದೇಹದ ಒಂದು ಭಾಗ ಕಾಣುತ್ತಿತ್ತು. ಸುತ್ತಲಿನ ಎಲೆಗಳು ರಕ್ತದಿಂದ ಒದ್ದೆಯಾಗಿದ್ದವು.
ಅಜ್ಜ ಮತ್ತು ಆತನ ಶಿಷ್ಯ ನಮ್ಮ ಹಿಂದೆಯೇ ಬಂದು ನಿಂತಿದ್ದ ಕಲ್ಪನೆ ನನಗಿರಲಿಲ್ಲ. ನಾವು ತಿರುಗಿ ನೋಡಿದಾಗ, ಅಜ್ಜ ಹನ್ನೆರಡು ಅಡಿ ದೂರದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದು ನಿಂತಿದ್ದ. ಆತನ ಕಣ್ಣುಗಳು ರಾಯರ ಮೇಲೆ ನೆಟ್ಟಿದ್ದವು. ಆ ಕಣ್ಣುಗಳಲ್ಲಿದ್ದ ದ್ವೇಷ, ಆಶ್ಚರ್ಯ ಮತ್ತು ಕೋಪವನ್ನು ವಿವರಿಸಲು ಅಸಾಧ್ಯ. ಅದು ರವಿವರ್ಮನ ಪೇಂಟಿಂಗ್ನಲ್ಲಿ ದುರ್ವಾಸ ಮುನಿಯು ಶಕುಂತಲೆಗೆ ಶಾಪ ನೀಡುವ ದೃಶ್ಯದಂತಿತ್ತು.
ಅಜ್ಜ ಬಲಗೈಯನ್ನು ರಾಯರ ಕಡೆಗೆ ಎತ್ತಿ ತೋರುಬೆರಳು ಚಾಚಿದ. ಆತನ ಉಗುರುಗಳು ಒಂದು ಇಂಚಿಗಿಂತ ಉದ್ದವಿದ್ದವು.
ಆತನ ಕಟುದ್ವನಿ ಕಾಡಿನ ಕತ್ತಲಿನ ನಡುವೆ ಪ್ರತಿಧ್ವನಿಸಿತು
"ಒಂದು ಬಾಲಕೃಷ್ಣ ಹೋದರೆ ಏನಂತೆ; ಅದರ ಸ್ಥಾನ ತುಂಬಲು ಮತ್ತೊಂದು ಬರುತ್ತದೆ. ಬಾಲಕೃಷ್ಣ ಅಮರ..."
ರಾಯರು ಕರವಸ್ತ್ರದಿಂದ ಕೈ ಒರೆಸಿಕೊಂಡು, "ನಡಿಯಿರಿ ಹೋಗೋಣ" ಎಂದರು. ಶಿಷ್ಯ ಆ ನಿರ್ಜೀವ ಹಾವನ್ನು ಎತ್ತಿಕೊಂಡ. ಹಾವಿನ ಉದ್ದ ನೋಡಿ ನಾನು ಬೆಚ್ಚಿಬಿದ್ದೆ! ನಾವು ಜೀಪ್ನತ್ತ ಮರಳಿದೆವು.
ಹಿಂದಿರುಗುವ ದಾರಿಯಲ್ಲಿ, ರಾಯರು ಒಂದಕ್ಷರವೂ ಮಾತನಾಡದೆ ಕಲ್ಲಿನಂತೆ ಸುಮ್ಮನಾಗಿದ್ದರು. ಆತನೇನೂ ತೊಂದರೆ ಮಾಡದಿದ್ದರೂ ಆ ಹಾವನ್ನು ಏಕೆ ಕೊಂದಿರಿ ಎಂದು ಕೇಳಿದೆ. ಅವರು ಮತ್ತೆ ಸಿಡಿಯಬಹುದು ಅಂದುಕೊಂಡೆ. ಆದರೆ ಅವರು ಕೇಳಿದ್ದು ಘಟನೆಗೆ ಸಂಬಂಧವೇ ಇಲ್ಲದ ಒಂದು ವಿಚಿತ್ರ ಪ್ರಶ್ನೆ.
"ಖಗಂ ಯಾರೆಂದು ನಿಮಗೆ ಗೊತ್ತೇ?"
ಖಗಂ? ಆ ಹೆಸರು ಎಲ್ಲೋ ಕೇಳಿದಂತಿದೆ, ಆದರೆ ಎಲ್ಲಿ ಎಂದು ನೆನಪಾಗಲಿಲ್ಲ. ರಾಯರು ಆ ಹೆಸರನ್ನು ಎರಡು ಬಾರಿ ಪಿಸುಗುಟ್ಟಿ ಮತ್ತೆ ಮೌನಕ್ಕೆ ಶರಣಾದರು.
ರೆಸ್ಟ್ಹೌಸ್ ತಲುಪುವಾಗ ಆರೂವರೆ ಆಗಿತ್ತು. ಅಜ್ಜನ ಆ ದ್ವೇಷದ ನೋಟ ಇನ್ನೂ ನನ್ನ ಕಣ್ಣಮುಂದೆ ಕಟ್ಟಿದಂತೆಯೇ ಇತ್ತು . ಬಾಲಕೃಷ್ಣ ಅಮರ, ಕಾಡಿನಲ್ಲಿ ಬೇರೆ ಕಾಳಿಂಗ ಸರ್ಪಗಳು ಇದ್ದೇ ಇರುತ್ತವೆ, ಶಿಷ್ಯರು ಮತ್ತೊಂದನ್ನು ಹಿಡಿಯುತ್ತಾರೆ ಎಂದುಕೊಂಡು ಸಮಾಧಾನ ಪಟ್ಟುಕೊಂಡೆ.
ರಾತ್ರಿಯ ಊಟಕ್ಕೆ ಲಕ್ಷ್ಮಣ ಬಿಸಿ ಪತ್ರೊಡೆ, ದಾಲ್ ಮತ್ತು ಚಪಾತಿ ಸಿದ್ಧಪಡಿಸಿದ್ದ. ರಾಯರು ಚೆನ್ನಾಗಿ ಊಟ ಮಾಡುವವರು; ಆದರೆ ಇಂದು ಅವರಿಗೆ ಹಸಿವೇ ಇಲ್ಲದಂತಿತ್ತು.
"ಹಾವನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪ ಆಗ್ತಿದೆಯಾ?" ಎಂದು ವಿಚಾರಿಸಿದೆ.
ಅವರು ಪೆಟ್ರೋಮ್ಯಾಕ್ಸ್ ಅನ್ನೇ ದಿಟ್ಟಿಸುತ್ತಿದ್ದರು. "ಹಾವು ಸಿಳ್ಳೆ ಹೊಡೆಯುತ್ತಿತ್ತು," ಎಂದು ಮೃದುವಾದ ಧ್ವನಿಯಲ್ಲಿ ಹೇಳಿದರು.
ನಾನು ನಗುತ್ತಾ, "ಸಿಳ್ಳೆ ಹೊಡೆಯುತ್ತಿತ್ತೇ, ಅಥವಾ ಬುಸುಗುಟ್ಟುತ್ತಿತ್ತೇ?" ಎಂದೆ.
"ಹೌದು, ಬುಸುಗುಟ್ಟುತ್ತಿತ್ತು... ಹಾವುಗಳು ಬುಸುಗುಟ್ಟಿದಾಗ ಮಾತನಾಡುತ್ತವೆ... ಇದು ನನಗೆ ಗೊತ್ತು, ಇದು ನನಗೆ ಗೊತ್ತು..." ರಾಯರು ತಾವೇ ಕೆಲವು ಬುಸುಗುಟ್ಟುವ ಶಬ್ದಗಳನ್ನು (ಸ್ಸ್.. ಸ್ಸ್..) ಮಾಡಿದರು. ಅವರ ತಲೆ ಲಯಬದ್ಧವಾಗಿ ತೂಗುತ್ತಿತ್ತು.
"ಹಾವುಗಳು ಬುಸುಗುಟ್ಟಿದಾಗ ಮಾತನಾಡುತ್ತವೆ... ಹಾವುಗಳು ಕಚ್ಚಿದಾಗ ಸಾಯಿಸುತ್ತವೆ... ಇದು ನನಗೆ ಗೊತ್ತು... ಇದೇನು? ಮೇಕೆ ಹಾಲೇ?" ಅವರ ಮುಂದಿದ್ದ ಪಾಯಸವನ್ನು ನೋಡಿ ಕೇಳಿದರು.
ಲಕ್ಷ್ಮಣನಿಗೆ 'ಮೇಕೆ' ಪದ ಅರ್ಥವಾಗದೆ, "ಹೌದು ಸಾಬ್, ಹಾಲಿದೆ" ಎಂದ.
ಅವರ ನಡವಳಿಕೆ ಮಿತಿಮೀರುತ್ತಿತ್ತು. ಬಹುಶಃ ಅವರಿಗೇ ಅದು ಅರಿವಾಗಿರಬೇಕು, "ಬಿಸಿಲಿನಲ್ಲಿ ಓಡಾಡಿದ್ದೆ, ನಾಳೆ ವಿಶ್ರಾಂತಿ ಬೇಕು," ಎಂದು ಎದ್ದು ಹೋದರು.
ಮರುದಿನ ಸಂಜೆ ನಾನು ಮಂಗಳೂರಿನ ಬಸ್ಸು ಹಿಡಿಯಬೇಕಿತ್ತು. ನನ್ನ ಸೂಟ್ಕೇಸ್ ಪ್ಯಾಕ್ ಮಾಡಿ, ಲಾಟೀನು ಬತ್ತಿ ಸಣ್ಣದು ಮಾಡಿ ಪೈಜಾಮ ಹಾಕಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ರಾಯರ ಕೋಣೆಯತ್ತ ಇದ್ದ ಬಾಗಿಲಿನ ಮೇಲೆ ಯಾರೋ ತಟ್ಟಿದ ಶಬ್ದವಾಯಿತು.
"ನಿಮ್ಮ ಬಳಿ ಫ್ಲಿಟ್, ಅಥವಾ ಸೊಳ್ಳೆ ಓಡಿಸುವ ಔಷಧ ಇದೆಯೇ?" ರಾಯರ ಒರಟಾದ ಪಿಸುಮಾತು.
"ಜಾಲರಿ ಮುಚ್ಚಿದ್ದರೂ ಸೊಳ್ಳೆ ಕಚ್ಚುತ್ತಿವೆಯೇ?" ಎಂದು ಕೇಳುತ್ತಾ ಬಾಗಿಲು ತೆರೆದೆ.
"ಯಾಕೋ ಒಂಥರಾ ಒರಟು ಅನಸ್ತಿದೆ, ನನ್ನ ಚರ್ಮದ ಮೇಲೆ ಕಲೆ ಆದಂತೆ ಕಣಿಸ್ತಿದೆ" ಎಂದರು. ನಾನು ಅವರನ್ನು ಒಳಗೆ ಕರೆದು ಲಾಟೀನು ದೀಪ ಎತ್ತಿ ಹಿಡಿದು ನೋಡಿದೆ.
ವರಾಂಡದ ಬೆಳಕಿನಲ್ಲಿ ಆ ಗುರುತುಗಳು ಸ್ಪಷ್ಟವಾಗಿ ಕಂಡವು. ಅವರ ಚರ್ಮದ ಮೇಲೆ ಬೂದುಬಣ್ಣದ, ವಜ್ರಾಕಾರದ ಕಲೆಗಳಿದ್ದವು! ಅಂತಹದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ. "ಯಾವುದೋ ವಿಚಿತ್ರ ಅಲರ್ಜಿಯಾಗಿರಬಹುದು, ಮಲಗಿ, ನಾಳೆ ಬೆಳಿಗ್ಗೆ ಡಾಕ್ಟರ್ ಹತ್ತಿರ ಹೋಗೋಣ," ಎಂದು ಕಳುಹಿಸಿದೆ.
ಹಾಸಿಗೆ ಹತ್ತಿ ಮಲಗಲು ಯತ್ನಿಸುತ್ತಿದ್ದೆ. ನನಗೆ ಯಾವಾಗಲೂ ಮಲಗಿದ ಹತ್ತು ನಿಮಿಷದಲ್ಲಿ ನಿದ್ದೆ ಬಂದಿರುತ್ತದೆ. ಆದರೆ ಆ ರಾತ್ರಿ ಹಾಗಾಗಲಿಲ್ಲ. ಅಷ್ಟರಲ್ಲಿ ಹೊರಗೆ ಕಾರು ಬಂದ ಶಬ್ದ ಕೇಳಿಸಿತು. ಅದರ ಬೆನ್ನಲ್ಲೇ ಇಂಗ್ಲಿಷ್ ಮಾತುಗಳು ಮತ್ತು ಒಂದು ನಾಯಿಯ ಬೊಗಳುವಿಕೆ ಕೇಳಿಸಿತು! ಯಾರೋ ವಿದೇಶಿ ಪ್ರವಾಸಿಗರು ಬಂದಿರಬೇಕು. ತೀಕ್ಷ್ಣವಾದ ಗದರುವಿಕೆಯಿಂದ ನಾಯಿ ಸುಮ್ಮನಾಯಿತು. ಕೀಟಗಳ ಸದ್ದು ಬಿಟ್ಟರೆ ಮತ್ತೆ ಕಾಡು ಸ್ತಬ್ಧವಾಯಿತು. ಆದರೆ ಪಕ್ಕದ ಕೋಣೆಯಲ್ಲಿ ರಾಯರು ಇನ್ನೂ ಕತ್ತಲಲ್ಲಿ ಅತ್ತಿತ್ತ ಅಲೆದಾಡುತ್ತಿದ್ದರು.
ರಾತ್ರಿ ಹತ್ತು ಮುಕ್ಕಾಲು. ಮತ್ತೆ ಬಾಗಿಲಿನ ಮೇಲೆ ಬಡಿದ ಸದ್ದು ಕೇಳಿಸಿತು. ರಾಯರೇ ತಟ್ಟಿರಬೇಕು ಎಂದು ನಾನು ಹಾಸಿಗೆಯಿಂದಲೇ ಕೂಗಿದೆ, "ಏನಾಯ್ತು ರಾಯರೇ?"
"ಸ್-ಸ್-ಸ್-ಸ್-"
"ಏನು ಸ್ಪಷ್ಟವಾಗಿ ಹೇಳಿ!"
"ಸ್-ಸ್-ಸ್-ಸ್-" ಅವರು ಮಾತನಾಡಲು ಕಷ್ಟಪಡುತ್ತಿದ್ದರು. ನನಗೆ ಸಣ್ಣದಾಗಿ ಬಾಗಿಲು ತೆರೆದೆ.
"ಸ್-ಸ್-ಸ್-ಸ್ನೇಕ್ ಅನ್ನೋದನ್ನ ಒಂದು 'ಎಸ್' ಇಂದ ಬರೆಯುತ್ತಾರಾ?" ಅವರು ಅಸಂಬದ್ಧವಾಗಿ ಕೇಳಿದರು.
"ರಾತ್ರಿ ಈ ಹೊತ್ತಲ್ಲಿ ಇದನ್ನ ಕೇಳೋಕೆ ಬಾಗಿಲು ತಟ್ಟಿದ್ರಾ?" ಎಂದು ಸಿಟ್ಟಾದೆ.
"ಕೇವಲ ಒಂದು ಎಸ್... ಸ್-ಸ್-ಸ್-ಸ್ಲೀಪ್ ... ಆದರೆ ಇಂದು ಸಂಜೆ ಸ್-ಸ್-ಸನ್ ಸೆಟ್ಟಿಂಗ್..." ಅವರು ಪದೇ ಪದೇ 'ಸ್-ಸ್' ಎಂದು ತೊದಲುತ್ತಿದ್ದರು.
"ನಿಮ್ಮ ನಾಲಿಗೆಗೆ ಏನಾಗಿದೆ? ಟಾರ್ಚ್ ಕೊಡಿ," ಎಂದು ಅವರ ಕೋಣೆಗೆ ಹೋಗಿ ಮುಖಕ್ಕೆ ಟಾರ್ಚ್ ಬಿಟ್ಟೆ. ಅವರು ತಮ್ಮ ನಾಲಿಗೆ ಹೊರಹಾಕಿದರು. ಅದರಲ್ಲಿ ಏನೋ ದೋಷವಿತ್ತು. ಮಧ್ಯದಲ್ಲಿ ಒಂದು ತೆಳುವಾದ ಕೆಂಪು ರೇಖೆ ಸೀಳಿದಂತೆ ಕಾಣುತ್ತಿತ್ತು!
ಕೋಣೆ ಅರೆಕತ್ತಲೆಯಲ್ಲಿತ್ತು. ಕಿಟಕಿಯ ಮೂಲಕ ಚಂದ್ರನ ಬೆಳಕು ನೆಲದ ಮೇಲೆ ಬೀಳುತ್ತಿತ್ತು. ರಾಯರು ಬೆಚ್ಚಗಿನ ಬಟ್ಟೆ ಹಾಕಿರಲಿಲ್ಲ. "ಹೋಗಿ ಮಲಗಿ," ಎಂದು ಕಟ್ಟುನಿಟ್ಟಾಗಿ ಹೇಳಿ, ನಾನು ಬಲವಂತವಾಗಿ ಅವರನ್ನು ಮಲಗಿಸಲು ಅವರ ಕೈ ಮುಟ್ಟಿದೆ.

ಕ್ಷಣಾರ್ಧದಲ್ಲಿ ನಾನು ಕರೆಂಟ್ ಹೊಡೆದಂತೆ ಹಿಂದೆ ಜಿಗಿದೆ! ಧೂರ್ಜಟಿ ರಾಯರ ದೇಹ ಹೆಪ್ಪುಗಟ್ಟಿದ ಮಂಜುಗಡ್ಡೆಯಂತೆ ತಂಪಾಗಿತ್ತು! ಜೀವಂತ ಮನುಷ್ಯ ಇಷ್ಟು ತಂಪಾಗಿರಲು ಸಾಧ್ಯವೇ ಇರಲಿಲ್ಲ. ಅವರು ಕಣ್ಣು ಮಿಟುಕಿಸದೇ ನನ್ನನ್ನೇ ದಿಟ್ಟಿಸುತ್ತಿದ್ದರು. ಮತ್ತೆ ಮತ್ತೆ ನಾಲಿಗೆ ಹೊರಹಾಕುತ್ತಿದ್ದರು.
ಪಿಸುಮಾತಿನಲ್ಲಿ ಹೇಳಿದರು, "ಅಜ್ಜ ನನ್ನನ್ನು ಕರೆಯುತ್ತಿದ್ದಾನೆ—'ಬಾಲಕೃಷ್ಣ!'... ಅವನು ಕರೆಯುವುದು ನನಗೆ ಕೇಳಿಸುತ್ತಿದೆ."
ಹಠಾತ್ತನೆ ಅವರ ಮೊಣಕಾಲುಗಳು ಮಡಚಿಕೊಂಡವು. ನೆಲದ ಮೇಲೆ ಎದೆಯೊಡ್ಡಿ ಚಪ್ಪಟೆಯಾಗಿ ಬಿದ್ದರು. ಮೊಣಕೈಗಳ ಮೇಲೆ ತಮ್ಮನ್ನು ತಾವು ಹಾವಿನ ಹಾಗೆ ತೆವಳುತ್ತಾ ಹಾಸಿಗೆಯ ಕೆಳಗಿನ ಕತ್ತಲಲ್ಲಿ ಕಣ್ಮರೆಯಾದರು!
ನಾನು ಬೆವರಿನಲ್ಲಿ ತೊಯ್ದು, ಓಡಿ ಬಂದು ನನ್ನ ಕೋಣೆಯ ಬಾಗಿಲು ಹಾಕಿಕೊಂಡು ಚಿಲಕ ಹಾಕಿದೆ. ಕಂಬಳಿಯೊಳಗೆ ತೂರಿ ತಲೆಯಿಂದ ಕಾಲಿನವರೆಗೆ ಮುಚ್ಚಿಕೊಂಡು ನಡುಗುತ್ತಿದ್ದೆ. ರಾಯರು ಹಾವನ್ನು ಕೊಂದಿದ್ದರು. ಅಜ್ಜ 'ಬಾಲಕೃಷ್ಣನ ಸ್ಥಾನಕ್ಕೆ ಮತ್ತೊಂದು ಬರುತ್ತದೆ' ಎಂದಿದ್ದ. ಆ ಮೈಮೇಲಿನ ವಜ್ರಾಕೃತಿಯ ಕಲೆಗಳು, ಸೀಳುತ್ತಿದ್ದ ನಾಲಿಗೆ, ತಂಪಾದ ದೇಹ... ಎಲ್ಲವೂ ತಲೆಗೆ ಹೋಯಿತು.
ಹಠಾತ್ತನೆ ನನಗೆ ನೆನಪಾಯಿತು! ಧೂರ್ಜಟಿ ರಾಯರು 'ಖಗಂ' ಬಗ್ಗೆ ಕೇಳಿದ್ದರಲ್ಲ? ಬಾಲ್ಯದಲ್ಲಿ ಮಹಾಭಾರತದಲ್ಲಿ ಓದಿದ್ದ ಕಥೆಯದು! ಖಗಂ ಎಂದರೆ ಮುನಿಯ ಶಾಪದಿಂದ ಹಾವಾಗಿ ಬದಲಾದ ವ್ಯಕ್ತಿಯ ಕಥೆ! ಖಗಂ—ಹಾವು—ಶಾಪ—ಎಲ್ಲವೂ ತಾಳೆಯಾಗುತ್ತಿತ್ತು!!.
ಮತ್ತೆ ಬಾಗಿಲು ತಟ್ಟುವ ಶಬ್ದ, ಈ ಬಾರಿ ಬಾಗಿಲಿನ ತಳಭಾಗದಲ್ಲಿ ನೆಲದ ಮಟ್ಟದಲ್ಲಿ! ಒಮ್ಮೆ, ಎರಡು, ಮೂರು ಬಾರಿ... ನಾನು ಉಸಿರು ಬಿಗಿಹಿಡಿದೆ. ಒಂದು ಭೀಕರ 'ಸ್ಸ್-ಸ್ಸ್' ಸೀತ್ಕಾರ ಬಾಗಿಲಿನಿಂದ ದೂರ ಸರಿಯಿತು.
ಸ್ವಲ್ಪ ಹೊತ್ತಿನಲ್ಲಿ ಪಕ್ಕದ ಕೋಣೆಯ ಕಡೆಯಿಂದ ಇಲಿ ಅಥವಾ ಹೆಗ್ಗಣ ಕೀರಲು ದನಿಯಲ್ಲಿ ಚೀರುವ ಶಬ್ದ ಕೇಳಿಸಿತು. ಮತ್ತೆ ಮೌನ.
ಸಮಯ ಒಂದು ಗಂಟೆಗೆ ಇನ್ನೂ ಕಾಲು ಗಂಟೆ ಇತ್ತು. ರಾಯರ ಕೋಣೆಯ ಬಾಗಿಲು ತೆರೆದು ಅವರು ವರಾಂಡಕ್ಕೆ ಬಂದ ಶಬ್ದವಾಯಿತು. ಅವರು ರಾತ್ರಿಯ ಈ ಹೊತ್ತಲ್ಲಿ ಎಲ್ಲಿಗೆ ಹೋಗುತ್ತಿರ ಬಹುದು?
ಆಚೆಕಡೆ ಇಂದ ಒಂದು ಸಣ್ಣ ಆದರೆ ಕೀರಲು ದ್ವನಿಯ ಸಿಳ್ಳೆ ಕೇಳಿಸಿತು.
ಆ ಸೀತ್ಕಾರದ ಶಬ್ದ ಈಗ ನಿಖರವಾಗಿ ನನ್ನ ಕಿಟಕಿಯ ಹೊರಗಿತ್ತು. ಪುಣ್ಯಕ್ಕೆ ಕಿಟಕಿಗೆ ದಪ್ಪನೆಯ ಜಾಲರಿಯ ಸೊಳ್ಳೆ ಪರದೆ ಹೊಡೆದಿದ್ದರು!
ಗೋಡೆಯ ಮೇಲೇರಿ ಏನೋ ಕಿಟಕಿಯತ್ತ ಬರುತ್ತಿತ್ತು. ಜಾಲರಿಯ ಹಿಂದೆ ಒಂದು ತಲೆ ಕಾಣಿಸಿಕೊಂಡಿತು. ಮಬ್ಬು ಬೆಳಕಿನಲ್ಲಿ ಒಂದು ಜೊತೆ ಮಣಿಯಂತ ಕಣ್ಣುಗಳು ನನ್ನನ್ನೇ ಸ್ಥಿರವಾಗಿ ದಿಟ್ಟಿಸುತ್ತಿದ್ದವು. ಆ ಕಣ್ಣುಗಳು ರಾಯರದೇ, ಆದರೆ ಆ ಮುಖ...!
ಒಂದು ನಿಮಿಷ ದಿಟ್ಟಿಸಿದ ಆ ಕಣ್ಣುಗಳು, ಪಕ್ಕದ ಕೋಣೆಯಲ್ಲಿದ್ದ ಟೂರಿಸ್ಟ್ಗಳ ನಾಯಿ ಹಠಾತ್ತನೆ ಬೊಗಳಿದ್ದರಿಂದ ಅತ್ತ ತಿರುಗಿದವು. ನಂತರ ಕಣ್ಮರೆಯಾದವು. ನಾಯಿ ತನ್ನೆಲ್ಲಾ ಶಕ್ತಿಯಿಂದ ಬೊಗಳುತ್ತಿತ್ತು. ಇಂಗ್ಲಿಷರ ಗದರುವಿಕೆ ಕೇಳಿಸಿತು. ನಾಯಿಯ ಬೊಗಳುವಿಕೆ ನರಳುವಿಕೆಯಾಗಿ ಬದಲಾಗಿ,ಸ್ತಬ್ಧವಾಯಿತು.
"ಹಾವುಗಳು ಬುಸುಗುಟ್ಟಿದಾಗ ಮಾತನಾಡುತ್ತವೆ..." ಆ ಹುಚ್ಚು ಸಾಲುಗಳು ನನ್ನ ತಲೆಯಲ್ಲಿ ಗುಂಯ್ ಗುಡುತ್ತಿದ್ದವು. ಹಾಗೇ ಯಾವಾಗಲೋ ನಿದ್ದೆಗೆ ಜಾರಿದ್ದೆ.
ಬೆಳಿಗ್ಗೆ ಉದ್ವಿಗ್ನ ಇಂಗ್ಲಿಷ್ ಮಾತುಗಳ ಶಬ್ದಕ್ಕೆ ಎಚ್ಚರವಾಯಿತು. ಸಮಯ ಆರು ಗಂಟೆ. ನಾನು ಬೇಗನೆ ಎದ್ದು ವರಾಂಡಕ್ಕೆ ಬಂದೆ. ಆ ಪ್ರವಾಸಿಗರ ಸಾಕುನಾಯಿ ರಾತ್ರಿ ಸತ್ತಿತ್ತು. ಯಾವುದೋ ಕ್ರೂರ ಹಾವು ಕಚ್ಚಿರಬೇಕು ಎಂದು ಅವರು ಅಂದುಕೊಳ್ಳುತ್ತಿದ್ದರು.
ನಾನು ರಾಯರ ಕೋಣೆಯತ್ತ ಹೋದೆ. ಬಾಗಿಲು ಅರ್ಧ ತೆರೆದಿತ್ತು, ಕೋಣೆ ಖಾಲಿಯಿತ್ತು. ಅಡುಗೆಯವ ಲಕ್ಷ್ಮಣನೂ ರಾಯರನ್ನು ನೋಡಿರಲಿಲ್ಲ. ಕಾಡಿನ ಸುತ್ತಮುತ್ತ ಹುಡುಕಿದರೂ ರಾಯರ ಸುಳಿವೇ ಇರಲಿಲ್ಲ.
ಆ ಧೂರ್ಜಟಿ ರಾಯರಿಗೆ ಏನಾಯಿತು ಎಂದು ತಿಳಿಯದೆ ನಾನು ಸಾಗರ ಬಿಟ್ಟು ಮಂಗಳೂರಿಗೆ ಹೋಗುವಂತಿರಲಿಲ್ಲ. ಪೇಟೆಗೆ ಹೋಗಿ ಮಂಗಳೂರಿನ ಮನೆಗೆ ಒಂದು ಕರೆ ಮಾಡಿ ಮಾಡಿ, ಬಸ್ ಟಿಕೆಟ್ ರದ್ದುಪಡಿಸಿ ಮತ್ತೆ ರೆಸ್ಟ್ ಹೌಸ್ಗೆ ಮರಳಿದೆ. ಆ ಇಬ್ಬರು ಇಂಗ್ಲಿಷರು ಈ ಮಧ್ಯೆ ತಮ್ಮ ನಾಯಿಯನ್ನು ಹೂತು ಹೋಗಿದ್ದರು.
ಇಡೀ ಮಧ್ಯಾಹ್ನ ಹುಡುಕಾಟದಲ್ಲೇ ಕಳೆಯಿತು. ನನ್ನ ತಲೆಯಲ್ಲಿ ಈಗ ಒಂದು ಮಸುಕಾದ ಭರವಸೆಯ ಎಳೆ ಇತ್ತು. ಜೀಪ್ ಡ್ರೈವರ್ಗೆ, "ನೇರವಾಗಿ ಹುಣಸೆಕಟ್ಟೆ ಅಜ್ಜನ ಆಶ್ರಮಕ್ಕೆ ಗಾಡಿ ಬಿಡು," ಎಂದೆ.
ಹಿಂದಿನ ದಿನದಂತೆಯೇ, ಅದೇ ಹೊತ್ತಿಗೆ ಸರಿಯಾಗಿ ನಾವು ಆಶ್ರಮ ತಲುಪಿದೆವು. ಅಜ್ಜ ನೆಮ್ಮದಿಯಿಂದ ಗಾಂಜಾ ಚಿಲುಮೆ ಸೇದುತ್ತಾ ಕುಳಿತಿದ್ದ. ಇಂದು ಆತನ ಜೊತೆ ಇನ್ನಿಬ್ಬರು ಶಿಷ್ಯರಿದ್ದರು.
"ಸ್ವಾಮಿ, ನಿನ್ನೆ ನನ್ನ ಜೊತೆ ಬಂದಿದ್ದರಲ್ಲ ಅವರ ಬಗ್ಗೆ ಏನಾದರೂ ಮಾಹಿತಿ ಇದೆಯೇ?" ಎಂದು ನೇರವಾಗಿ ಕೇಳಿದೆ.
ಅಜ್ಜನ ಮುಖದಲ್ಲಿ ಮೃದುವಾದ ನಗು ಮೂಡಿತು. "ಖಂಡಿತವಾಗಿಯೂ ಇದೆ! ನಿಮ್ಮ ಜೊತೆಗಾರ ನನ್ನ ಭರವಸೆಯನ್ನು ಈಡೇರಿಸಿದ್ದಾನೆ. ಆತ ನನ್ನ ಬಾಲಕೃಷ್ಣನನ್ನು ಮರಳಿ ತಂದಿದ್ದಾನೆ."
ಅಜ್ಜನ ಪಕ್ಕದಲ್ಲಿ ಮೇಕೆ ಹಾಲಿನ ಮಡಕೆ ಇತ್ತು!
"ಅವನನ್ನು ನೀವು ನಿನ್ನೆ ನೋಡಿದ ಸ್ಥಿತಿಯಲ್ಲಿ ಈಗ ನೋಡಲಾರಿರಿ, ಆದರೆ ಆತ ಒಂದು ನೆನಪಿನ ಕಾಣಿಕೆ ಬಿಟ್ಟುಹೋಗಿದ್ದಾನೆ. ಬಾಲಕೃಷ್ಣನ ಹುತ್ತದಿಂದ ಐವತ್ತು ಹೆಜ್ಜೆ ದಕ್ಷಿಣಕ್ಕೆ ಹೋಗಿ ನೋಡಿ," ಎಂದ ಅಜ್ಜ.
ನಾನು ಆ ಹುತ್ತದ ಬಳಿ ಹೋಗಿ, ಮುಳ್ಳಿನ ಪೊದೆಗಳ ಮೂಲಕ ದಕ್ಷಿಣಕ್ಕೆ ಸಾಗಿದೆ. ಒಂದು ಬೇಲದ ಮರದ ಬುಡದಲ್ಲಿ ಏನೋ ಬಿದ್ದಿತ್ತು. ಅದು ವಜ್ರಾಕೃತಿಯ ವಿನ್ಯಾಸದಿಂದ ಕೂಡಿದ, ಹೊಸದಾಗಿ ಕಳಚಿದ ಪೊರೆಯಾಗಿತ್ತು!
ಆದರೆ ಅದು ಸಾಮಾನ್ಯ ಹಾವಿನ ಪೊರೆಯಾಗಿರಲಿಲ್ಲ. ಹಾವಿನ ದೇಹದಿಂದ ಕೈ ಕಾಲುಗಳು ಹೊರಚಾಚಿಕೊಂಡಿರುತ್ತವೆಯೇ!? ಅದು ನಿಜಕ್ಕೂ ಮನುಷ್ಯನೊಬ್ಬ ಕಳಚಿಟ್ಟ ಪೊರೆಯಾಗಿತ್ತು!
ಅಲ್ಲಿ, ಹುತ್ತದೊಳಗಿಂದ ಬುಸುಗುಟ್ಟುವ ಸದ್ದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಸೂರ್ಯ ಅಸ್ತಮಿಸುತ್ತಿದ್ದ.
ಗುಡಿಸಲಿನ ಬಳಿಯಿಂದ ಅಜ್ಜ ಕರೆಯುತ್ತಿದ್ದ: "ಬಾಲಕೃಷ್ಣ—ಬಾಲಕೃಷ್ಣ—ಬಾಲಕೃಷ್ಣ."




